100 ರೂ. ಹೊಸ ನೋಟು ಅಸಲಿ ಎಂದು ಪತ್ತೆ ಹಚ್ಚುವುದು ಹೇಗೆ? ಹುಷಾರ್ ಎಟಿಎಂನಿಂದ ತೆಗೆದ ಹಣವನ್ನು ಪರ್ಸ್ಗಿಳಿಸುವ ಮುನ್ನ ಅದು ಅಸಲಿಯೇ? ಎಂದು ಪರಿಶೀಲಿಸಿಕೊಳ್ಳಿ.
ನೋಟು ಅಮಾನ್ಯೀಕರಣವಾದ ಬಳಿ ಹೊಸ ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಚಾಲ್ತಿಗೆ ಬರುತ್ತಿದ್ದು, ಯಾವುದು ಅಸಲಿ, ಯಾವುದು ನಕಲಿ ಎಂದು ನಿರ್ಧರಿಸುವುದು ಹೇಗೆ?
ಎರಡು ವರ್ಷದ ಹಿಂದೆ ಅಮಾನ್ಯೀಕರಣವಾದ ನಂತರ ಎಲ್ಲೆಡೆ ಹಣದ ಸಮಸ್ಯೆ ಎದುರಾಗಿತ್ತು. ಆನಂತರ ಹೊಸ ನೋಟುಗಳನ್ನು ಚಾಲ್ತಿಗೆ ತರಲಾಯಿತಾದರೂ ಯಾವುದು ನಿಜವಾದ ನೋಟು ಎಂದು ಪತ್ತೆಹಚ್ಚುವುದೇ ತಲೆನೋವಿನ ಸಂಗತಿಯಾಗಿತ್ತು.
2000, 500, 200, 50, 10 ರೂ.ಗಳ ಜೊತೆಗೆ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಾಲ್ತಿಗೆ ತರಲಾಗಿದೆ. ಕಳೆದ ಜುಲೈ 19ರಂದು ಎಲ್ಲ ಬ್ಯಾಂಕ್ಗಳಲ್ಲಿ 100 ರೂ. ಹೊಸ ನೋಟುಗಳು ಲಭ್ಯವಿರಲಿವೆ ಎಂದು ಆರ್ಬಿಐ ಘೋಷಿಸಿತ್ತು. ತಿಳಿ ನೇರಳೆ ಬಣ್ಣದಲ್ಲಿರುವ ಈ ನೋಟುಗಳ ಹಿಂಭಾಗದಲ್ಲಿ ಗುಜರಾತ್ನಲ್ಲಿರುವ ಯುನೆಸ್ಕೋದ ಪಾರಂಪರಿಕ ಹಿನ್ನೆಲೆಯುಳ್ಳ ರಾಣಿ ಕಿ ವಾವ್ (ಮೆಟ್ಟಿಲುಗಳಿರುವ ರಾಣಿಯ ಕೊಳ)ದ ಚಿತ್ರವಿರಲಿದೆ ಎಂದು ಹೇಳಲಾಗಿತ್ತು.
ಈ ನೋಟುಗಳು ಅಸಲಿ ಹೌದೋ ಅಲ್ಲವೋ ಎಂಬುದನ್ನು ಪತ್ತೆಹಚ್ಚುವುದು ಹೇಗೆ ಎಂಬ ಅನುಮಾನಗಳು ಜನರಿಗೆ ಇದ್ದೇ ಇರುತ್ತವೆ. ಹೊಸ ನೋಟಿನ ಮುಂಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 100 ಎಂಬ ಸಂಖ್ಯೆಯನ್ನು ಮುದ್ರಿಸಲಾಗಿರುತ್ತದೆ. ಮಧ್ಯಭಾಗದಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರ ಇರುತ್ತದೆ. ಆರ್ಬಿಐ, ಭಾರತ್, ಇಂಡಿಯಾ ಮತ್ತು 100 ಎಂಬ ಹೆಸರುಗಳನ್ನು ಅತಿಸಣ್ಣ ಅಕ್ಷರಗಳಲ್ಲಿ ಮುದ್ರಿಸಲಾಗಿರುತ್ತದೆ. ನೋಟನ್ನು ಮಡಿಚಿದಾಗ ಭಾರತ್ ಎಂದು ಹಿಂದಿಯಲ್ಲಿ ಬರೆದುಕೊಂಡಿರುವ ಅಕ್ಷರ ಮತ್ತು ಆರ್ಬಿಐ ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿರುವ ಅಕ್ಷರ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
ಮಹಾತ್ಮ ಗಾಂಧೀಜಿ ಅವರ ಚಿತ್ರದ ಬಲ ಭಾಗದಲ್ಲಿ ಆರ್ಬಿಐ ಗವರ್ನರ್ ಸಹಿ ಮತ್ತು ಲಾಂಛನ ಮುದ್ರಿಸಲ್ಪಟ್ಟಿರುತ್ತದೆ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವನ್ನು ಮುದ್ರಿಸಲಾಗಿರುತ್ತದೆ. ಮಹಾತ್ಮ ಗಾಂಧೀಜಿ ಚಿತ್ರ ಮತ್ತು 100 ರೂ. ಎಂದು ಬರೆದಿರುವ ಅಕ್ಷರಗಳು ವಾಟರ್ಮಾರ್ಕ್ ರೀತಿಯಲ್ಲಿ ಮುದ್ರಿಸಲ್ಪಟ್ಟಿರುತ್ತದೆ. ಅಂಧರಿಗೆ ಅನುಕೂಲವಾಗಲೆಂದು ಅಶೋಕ ಸ್ತಂಭದ ಲಾಂಛನ, ಗಾಂಧೀಜಿ ಫೋಟೊ, 100 ರೂ. ಎಂದು ನಮೂದಿಸ್ಪಟ್ಟಿರುವ ಅಂಕಿಗಳನ್ನು ಕೊಂಚ ಉಬ್ಬಾಗಿ ಮುದ್ರಿಸಲಾಗಿರುತ್ತದೆ. ನೋಟಿನ ಎಡಭಾಗ ಮತ್ತು ಬಲಭಾಗದಲ್ಲಿ ನಾಲ್ಕು ಚುಕ್ಕಿಗಳ ಮಾದರಿಯನ್ನು ಉಬ್ಬಾಗಿ ಮುದ್ರಿಸಲಾಗಿರುತ್ತದೆ.
ನೋಟಿನ ಹಿಂಭಾಗದಲ್ಲಿ ನೋಟನ್ನು ಪ್ರಿಂಟ್ ಮಾಡಿದ ವರ್ಷವನ್ನು ಎಡಭಾಗದಲ್ಲಿ ಮುದ್ರಿಸಲಾಗಿರುತ್ತದೆ. ಸ್ವಚ್ಛಭಾರತ ಲೋಗೋ ಮತ್ತು ಸ್ಲೋಗನ್, ವಿವಿಧ ಭಾಷೆಗಳಲ್ಲಿ 100 ರೂ. ಎಂದು ಮುದ್ರಿಸಿರುವ ಪಟ್ಟಿ ಇರುತ್ತದೆ. ಹಿಂಭಾಗದಲ್ಲಿ ಮುದ್ರಿತವಾಗಿರುವ ರಾಣಿ ಕಿ ವಾವ್ ಮೇಲೆ ಅದರ ಹೆಸರನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಮೂದಿಸಲಾಗಿರುತ್ತದೆ.
ನಕಲಿ ನೋಟುಗಳನ್ನು ಬೇರೆಯವರಿಗೆ ಹಸ್ತಾಂತರಿಸುವುದು ಐಪಿಸಿ ಸೆಕ್ಷನ್ 489ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದು ನೆನಪಿನಲ್ಲಿರಲಿ. ನಿಮ್ಮ ಕೈಗೇನಾದರೂ ನಕಲಿ ನೋಟು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿ. ಎಟಿಎಂನಲ್ಲಿ ನಕಲಿ ನೋಟುಗಳು ಸಿಕ್ಕರೆ ಬ್ಯಾಂಕುಗಳು ಈ ನಕಲಿ ನೋಟುಗಳನ್ನು ಹಂಚಲು ಪ್ರಯತ್ನಿಸುತ್ತಿವೆ ಎಂದರ್ಥ. ಇದು ಸಾಬೀತಾದರೆ ಆರ್ಬಿಐ ಆ ಬ್ಯಾಂಕ್ಗೆ ದಂಡ ವಿಧಿಸಬಹುದು. ಹಾಗಾಗಿ, ಎಟಿಎಂನಿಂದ ತೆಗೆದ ಹಣವನ್ನು ಪರ್ಸ್ಗಿಳಿಸುವ ಮುನ್ನ ಅದು ಅಸಲಿಯೇ? ಎಂದು ಪರಿಶೀಲಿಸಿಕೊಳ್ಳಿ.
-ಕನಸಿನ ಕನ್ನಡಿ (ಇಷ್ಟ ಆಗಿದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ )
No comments: